Chapter 1
1 ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದ ಸಭೆಗೆ ಪೌಲ ಸಿಲ್ವಾನ, ತಿಮೊಥೆಯ ಎಂಬ ನಾವು ಬರೆಯುವುದೇನಂದರೆ, ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ.
2 ದೇವರಿಂದ ಪ್ರೀತಿಸಲ್ಪಟ್ಟಿರುವ ಸಹೋದರರೇ, ಆತನು ನಿಮ್ಮನ್ನು ಆರಿಸಿಕೊಂಡನೆಂಬದನ್ನೂ ಬಲ್ಲೆವು.
3 ಯಾಕೆಂದರೆ ನಾವು ನಿಮ್ಮಲ್ಲಿ ಸಾರಿದ ಸುವಾರ್ತೆಯು ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಮತ್ತು ಬಹು ನಿಶ್ಚಯದೊಡನೆಯೂ ಬಂತೆಂಬುದನ್ನು ನೀವೂ ಬಲ್ಲಿರಿ. ಯಾಕೆಂದರೆ ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಹೇಗೆ ವರ್ತಿಸಿದ್ದೇವೆಂಬುದನ್ನು ನೀವು ಗಮನಿಸಿದ್ದೀರಿ.
4 ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ.
5 ಹೀಗೆ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಕ್ರಿಸ್ತನನ್ನು ನಂಬುವವರೆಲ್ಲರಿಗೆ ಮಾದರಿಯಾದಿರಿ.
6 ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಘೋಷಿತವಾದದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು. ಆದುದರಿಂದ ಆ ವಿಷಯದಲ್ಲಿ ನಾವು ಏನನ್ನೂ ಹೇಳಬೇಕಾಗಿಲ್ಲ.
7 ನಾವು ನಿಮ್ಮಲ್ಲಿಗೆ ಬಂದಾಗ ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ನೀವು ವಿಗ್ರಹಗಳನ್ನು ತೊರೆದು ದೇವರ ಕಡೆಗೆ ತಿರುಗಿಕೊಂಡು ಜೀವಸ್ವರೂಪನಾದ ಸತ್ಯ ದೇವರನ್ನು ಸೇವಿಸುವವರಾಗಿದ್ದೀರಿ
8 ಮತ್ತು ಆತನು ಸತ್ತವರೊಳಗಿಂದ ಎಬ್ಬಿಸಿದ, ಆಕಾಶದೊಳಗಿಂದ ಬರಲಿಕ್ಕಿರುವಂಥ ಆತನ ಕುಮಾರನನ್ನು ಕಾದುಕುಳಿತಿರುವಿರೆಂತಲೂ ಆ ಜನರೇ ಹೇಳುತ್ತಾರೆ. ಈ ಯೇಸು ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುವಾತನು.
